ಗ್ರಾಮೀಣ ಕ್ರೀಡೆ

 1. ಚನ್ನೆ ಮಣೆ ( ಅಳಿಗುಳಿಮನೆ)

  ಚನ್ನೆ ಮಣೆ ಎಲ್ಲರ ಮನೆಯಲ್ಲೂ ಇದ್ದ ಕಾಲ ಇತ್ತು.  ಗ್ರಾಮೀಣ ಆಟ. ಮರದಿಂದ ತಯಾರಿಸಿದ ಮಣೆಯಲ್ಲಿ ಎರಡು ಸಾಲುಗಳಲ್ಲಿ ತಲಾ ಏಳು ಕುಳಿಗಳಲ್ಲಿ ಚನ್ನೆ ಕಾಯಿ ಅಥವಾ ಹುಣಸೆ ಬೀಜಗಳನ್ನು ಉಪಯೋಗಿಸಿ ಇದನ್ನು ಆಡಲಾಗುತ್ತದೆ. ಎಲ್ಲಾ ವಯೋಮಾನದವರಿಗೂ ಇಷ್ಟವಾದ ಆಟ. ಒಂದು ಮಣೆಯಲ್ಲಿ ಇಬ್ಬರು ಆಡಬಹುದು. ಮೊದಲಿಗೆ ಪ್ರತಿ ಕುಳಿಯಲ್ಲೂ ೪ ಕಾಯಿಗಳನ್ನು ಹಾಕಬೇಕು. ಇಬ್ಬರೂ ಆಟಗಾರರೂ ಒಂದೊಂದು ಸಾಲನ್ನು ಆರಿಸಿಕೊಳ್ಳಬೇಕು. ತಮ್ಮ ಸಾಲಿಗೆ ಸೇರಿದ ಯಾವುದಾದರೊಂದು ಕುಳಿಯಿಂದ ಕಾಯಿಗಳನ್ನು ತೆಗೆದು, ಒಂದೊಂದಾಗಿ ಮುಂದಿನ ಕುಳಿಗಳಲ್ಲಿ ಹಾಕಬೇಕು. ಕೈಯಲಿದ್ದ ಕಾಯಿಗಳು ಖಾಲಿಯಾದಲ್ಲಿ ನಂತರದ ಕುಳಿಯಿಂದ ಮತ್ತೆ ಕಾಯಿಗಳನ್ನು ತೆಗೆದು, ಮುಂದಿನ ಕುಳಿಗಳಿಗೆ ಹಾಕಬೇಕು.

 2. ಲಗೋರಿ

  ಈ ಆಟಕ್ಕೆ ಕನಿಷ್ಠ ಆರು ಜನ ಬೇಕು. ಇದಕ್ಕೆ ಹಣ ವ್ಯಯಿಸಬೇಕಾಗಿಲ್ಲ. ಆರರಿಂದ ಏಳು ಹೆಂಚಿನ ತುಂಡು, ಕಲ್ಲು ಯಾವುದಾದರೂ ಆಯ್ಕೆಮಾಡಿಕೊಂಡು ಒಂದು ಪಾರ್ಟಿಯವರು ಒಂದರ ಮೇಲೊಂದರಂತೆ ಜೋಡಿಸಬೇಕು.
  ಎದುರು ಪಾರ್ಟಿಯವರು ಪ್ಲಾಸ್ಟಿಕ್ ಚೆಂಡಿನಿಂದ ಜೋಡಿಸಿಟ್ಟ ಚೂರುಗಳಿಗೆ ಹೊಡೆಯಬೇಕು. ಇದನ್ನು ಎದುರು ಪಾರ್ಟಿಯವರು ಜೋಡಿಸಲು ಬಂದಾಗ ಅವರಿಗೆ ಚೆಂಡಿನಿಂದ ಹೊಡೆಯಬೇಕು.
  ಚೆಂಡು ಮೈಗೆ ತಾಗಿದರೆ ಹೊಡೆದ ಪಾರ್ಟಿಗೆ ಒಂದು ಅಂಕ ಸಿಗುತ್ತದೆ. ಹೀಗೆ ಗರಿಷ್ಠ ಅಂಕ ನಿಗದಿಪಡಿಸಿಕೊಂಡು ಯಾರು ಗೆಲ್ಲುತ್ತಾರೆ ಎಂದು ಆಡುವುದು. ಇಂಥ ಆಟದಿಂದ ಮಕ್ಕಳಿಗೆ ದೈಹಿಕ ಶ್ರಮ ದೊರೆಯುತ್ತದೆ.
  ಜೊತೆಗೆ ಸಮೂಹದಲ್ಲಿ ಆಡುವ ಮನೋಭಾವ ಮೂಡುತ್ತದೆ.

 3. ಅವರ್ನ ಬಿಟ್ ಇವರ್ಯಾರು

  ಈ ಆಟಕ್ಕಂತೂ ಎಷ್ಟು ಜನರಿದ್ದರೂ ನಡೆಯುತ್ತದೆ. ಕನಿಷ್ಠ 5 ಜನರಿದ್ದರೆ ಚೆನ್ನ. ಒಬ್ಬರು ಇನ್ನೊಬ್ಬರ ಕಣ್ಣು ಮುಚ್ಚಿ ಎದುರಿನಲ್ಲಿರುವವರು ಯಾರೆಂದು ಬೆರಳು ತೋರಿಸಿ ಕೇಳುತ್ತಾರೆ.
  ಆಗ ಮುಂಚೆಯೇ ನಿಂತಿದ್ದ ಮಕ್ಕಳು ಅದಲು ಬದಲಾಗುತ್ತಾರೆ. ಅವರನ್ನು ಸರಿಯಾಗಿ ಗುರುತಿಸಿದರೆ ಮತ್ತೆ ಅವರು ಕಳ್ಳರಾಗುತ್ತಾರೆ.
  ಹೀಗೆ ಹತ್ತು ಹಲವು ಆಟಗಳು ಯಾವುದೇ ಖರ್ಚಿಲ್ಲದೆ ಮಕ್ಕಳಿಗೆ ಮನರಂಜನೆ ಒದಗಿಸಬಲ್ಲವು. ಇಂಥ ಆಟಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಕೀಳರಿಮೆ,
  ಖಿನ್ನತೆ, ಶೀಘ್ರ ಕೋಪಗೊಳ್ಳುವಿಕೆ ಶಮನವಾಗುತ್ತದೆ. ಗೆಳೆತನ ವೃದ್ಧಿಯಾಗುತ್ತದೆ. ಈ ಆಟಗಳನ್ನು ಆಡಿಸಲು ದೊಡ್ಡವರ ಅವಶ್ಯ ಕೂಡ ಇಲ್ಲ