ಹುಂಡಿ ಆಟ

Body: 


ಕಣ್ಣಿನ ಚುರುತನ ತೋರುವ ಹುಂಡಿ ಆಟ:

ದೀಪಾವಳಿ ಹಬ್ಬದ ಆಸುಪಾಸಿನಲ್ಲಿ ಹುಲ್ಲು ತೆನೆಬಿಟ್ಟು ಹೂವಾಗಿ ಅರಳುತ್ತವೆ. ಒಂದು ಜಾತಿಯ ಹುಲ್ಲಿನ ತೆನೆ ಎರಡು ಕವಲಾಗಿ ಅರಳುತ್ತವೆ. ಅಪರೂಪಕ್ಕೆ 3-4-5 ಕವಲುಗಳಾಗಿ ಅರಳುವುದೂ ಇದೆ. ಲಕ್ಷಾಂತರ ತೆನೆಗಳಲ್ಲಿ ಎರಡಕ್ಕಿಂತ ಹೆಚ್ಚು ಕವಲಿರುವ ತೆನೆಗಳನ್ನು ಹುಡುಕಿ ಎದುರಿಗಿದ್ದವರಿಗೆ ಗೊತ್ತಾಗದಂತೆ ಹುಡುಕಿ ತೆಗೆದು ತೋರಿಸುತ್ತ ಅವರ ಹೆಸರು ಹೇಳಿ “ಮೂರ್ಕಾಲು ಹುಂಡಿ (3 ಕವಲಿದ್ದರೆ, ನಾಲ್ಕು ಕವಲಿದ್ದರೆ ನಾಲ್ಕಾಲು ಹುಂಡಿ ಹೀಗೆ) ತಿರುಕಾಲು ಹುಂಡಿ ಶಿಂಗ್ಯೋ” ಎಂದರೆ ಅವರ ಮೇಲೊಂದು ಹುಂಡಿ ಹೊರಿಸಿದಂತಾಯಿತು. ಕೆಲವು ಕಡೆ ಹುಂಡಿ ಬದಲಾಗಿ ಗುದ್ದು ಎನ್ನುವ ಪರಿಪಾಠವೂ ಇದೆ. ನಮಗಿಂತಲೂ ಮುಂಚಿತವಾಗಿ ಎದುರಿನವರು ಹೇಳಿದರೆ ನಮ್ಮ ಮೇಲೊಂದು ಹುಂಡಿ. ಆಗುತ್ತದೆ. ಅದನ್ನು ತೀರಿಸಲು ಅದೇ ತೆರದ ಮತ್ತೊಂದು ಹುಂಡಿಯನ್ನು ಹುಡುಕಿ “ತೀರು ಹುಂಡಿ ತಿರುಕಾಲು ಹುಂಡಿ ಶಿಂಗ್ಯೋ” ಎಂದು ಹೇಳಿ ತೀರಿಸಬೇಕು.

ಈ ಆಟ ಕೇವಲ ದೀಪಾವಳಿ ವರೆಗೆ ಮಾತ್ರ ಚಾಲ್ತಿ. ನಂತರ ಹೊರಿಸಿದರೆ/ ತೀರಿಸಿದರೆ ಅದಕ್ಕೆ “ಹಬ್ಬಾದಮೇಲೆ ಹಳೆ ಹುಂಡಿ, ಸುಗ್ಯಾದಮೇಲೆ ಶಿವರಾತ್ರಿ” ಅಂತ ಹೇಳಿ ಅದನ್ನು ತಿರಸ್ಕರಿಸ ಬಹುದು. ಕೆಲವೆಡೆ ಗಂಟಿ ಹುಣ್ಣಿಮೆಯ ವರೆಗೆ ಆಟ ಚಾಲ್ತಿಯಲ್ಲಿರುತ್ತದೆ.