Submitted by devaru.rbhat on ಗುರು, 09/24/2015 - 18:32

 

ಕಲಾವಿದ ತನ್ನಲ್ಲಿರುವ ಕಲೆಯ ಅಭಿವ್ಯಕ್ತಿಗೆ ಆಯ್ದು ಕೊಳ್ಳುವುದು ಹಲವು ಮಾಧ್ಯಮಗಳು.  ಹೆಚ್ಚಾಗಿ ಹೆಂಗೆಳೆಯರ ಕಲೆ ಎಂದೇ ಖ್ಯಾತವಾಗಿರುವ ಹತ್ತಿಯ ಹಾರಗಳ ತಯಾರಿಕೆಯಲ್ಲಿ ಅಪರೂಪಕ್ಕೆಂಬಂತೆ ಸಾಗರ ತಾಲ್ಲೂಕು ತಲವಾಟ ಗ್ರಾಮದ ಬಚ್ಚಗಾರು ಗಾಲಿ ಶ್ರೀಪತಿ ಹೆಗಡೆ ತಮ್ಮ ಛಾಪು ಮೂಡಿಸಿದ್ದಾರೆ.


ಮೂಲತಃ ಕೃಷಿ ಕುಟುಂಬದ ಇವರು ಕೃಷಿಯೊಡನೆ ಹವ್ಯಾಸವಾಗಿ ಮದುವೆ ಮನೆ, ಚೌತಿಯ ಗಣೇಶನ ಮಂಟಪ ಮುಂತಾದವುಗಳನ್ನು ಶೃಂಗರಿಸುವುದರಲ್ಲಿ ತೊಡಗಿಸಿ ಕೊಂಡವರು.  ಮದುವೆಯ ಅವಿಭಾಜ್ಯ ಅಂಗವಾದ ದಾರೆ ಮಂಟಪ ತಯಾರಿ ಇವರ ಹವ್ಯಾಸವಾಗಿ ಬೆಳೆದು ಬಂತು.  ಮಂಟಪಕ್ಕೆ ಬೇಕಾದ ಅಡಿಕೆ ಕಂಬಗಳ ತಯಾರಿಯಿಂದ ಹಿಡಿದು, ಪುಟ್ಟ ಪುಟ್ಟ ನವಿರಾದ ಅಡಿಕೆ ದಬ್ಬೆಗಳನ್ನು ತಯಾರಿಸಿ ಅವುಗಳನ್ನು ಜೋಡಿಸಿ ಚತುರ್ಭುಜ, ಅಷ್ಟಭುಜ, ಅರ್ಧಚಂದ್ರಾಕೃತಿ, ಪೂರ್ಣ ಚಂದ್ರಕೃತಿಯ ಆರ್‍ಸಿಸಿ ಕಟ್ಟಡದ ಪ್ರತಿಕೃತಿಗಳನ್ನು ಸೃಷ್ಟಿಸಿಕೊಂಡು ಅದಕ್ಕೆ ಕಾಗದದಿಂದ ಅಲಂಕರಿಸುವುದನ್ನು ರೂಢಿಸಿಕೊಂಡ ಇವರು ಅದಕ್ಕೆ ಬೇಕಾದ ಬಿಳಿ ಕಾಗದದ ಚಿತ್ತಾರಗಳನ್ನು ಪುಟ್ಟ ಪುಟ್ಟ ಚಾಣಗಳಿಂದ (ಪುಟ್ಟ ಪುಟ್ಟ ಉಳಿಗಳು)  ಕಡಿದು ಅವುಗಳಿಗೆ ಹೊಂದುವ ಹಿನ್ನೆಲೆಯ ಬಣ್ಣ ಬಣ್ಣದ ಕಾಗದಗಳ ಮೇಲೆ ಅಂಟಿಸಿ ಅಂದಗೊಳಿಸುವಲ್ಲಿ ತಮ್ಮ ಪ್ರಾವೀಣ್ಯತೆ ಮೆರೆದವರು.  

 

 

ಇತ್ತೀಚಿನ ದಿನಗಳಲ್ಲಿ ಕಲ್ಯಾಣ ಮಂಟಪ ಹಾಗೂ ಅದ್ಧೂರಿ ಮದುವೆಗಳ ವ್ಯವಸ್ಥೆಯಲ್ಲಿ ರೆಡಿಮೇಡ್ ಮಂಟಪಗಳು,  ಹೂವಿನ ಅಲಂಕಾರಗಳು, ಜಗಮಗಿಸುವ ದೀಪಗಳು,  ಗುತ್ತಿಗೆ ನೀಡುವ ಪದ್ಧತಿ ಚಾಲ್ತಿಯಾಗಿ ಕಾಗದ ಬಳಸಿ ಮಾಡುವ ಮಂಟಪಗಳು ತಮ್ಮ ಹೊಳಪನ್ನು ಕಳೆದುಕೊಂಡವು.  


ಆದರೆ ಶ್ರೀಪತಿಯಲ್ಲಿಯ ಕಲಾವಂತಿಕೆ ಸುಮ್ಮನೆ ಕೂರದೆ ಹಬ್ಬ ಹರಿದಿನಗಳ ಅವಿಭಾಜ್ಯ ಅಂಗವಾಗಿರುವ ಹತ್ತಿ ಹಾರದೆಡೆಗೆ ಹರಿಯಿತು.  ಅದರ ಫಲವೇ ಈ ಹತ್ತಿಯ ಆಭರಣಗಳು.  
ಸಾಮಾನ್ಯವಾಗಿ ಹತ್ತಿಯ ಎಳೆಗಳನ್ನು ತೆಗೆದು ಅದನ್ನು ವಿವಿಧ ವಿನ್ಯಾಸಗಳಲ್ಲಿ ಜೋಡಿಸಿ ಹಾರ ತಯಾರಿಸುವುದು ರೂಢಿ.  ಶ್ರೀಪತಿಯವರು ಹೊಸ ಪ್ರಯೋಗವನ್ನೇ ಮಾಡಲು ಮುಂದಾಗಿ ಅಂಗಡಿಗಳಲ್ಲಿ ದೊರೆಯುವ ಬ್ಯಾಂಡೇಡ್ ಹತ್ತಿಯ ಒಂದೋಂದೇ ಪದರುಗಳನ್ನು ಬಿಡಿಸಿ ಅದರ ಮೇಲೆ ವಿವಿಧ ರೀತಿಯ ಆಭರಣಗಳ ನಕ್ಷೆ ಬರದುಕೊಂಡು  ಅದೇ ಕಾಗದಗಳನ್ನು ಕಡಿಯುವ ಚಾಣಗಳಿಂದಲೇ ಎಳೆಯಿಂದ ಕೂಡಿದ ಹತ್ತಿಯನ್ನು ಅತ್ಯಂತ ಜಾಗರೂಕತೆಯಿಂದ ಕಡಿದು ಬಣ್ಣಬಣ್ಣದ ಟಿಕಳಿಗಳನ್ನು ಅಂಟಿಸಿ ಮೆರಗು ನೀಡಿದ್ದಾರೆ. 

 

ಹತ್ತಿ ಆಭರಣಗಳ ಮಾಟಗಾರ - ಶ್ರೀಪತಿ ಹೆಗಡೆ