Submitted by ಸುಧೀಂದ್ರ on ಭಾನು, 07/21/2019 - 00:00

ಶರಾವತಿಯ ಮತ್ತು ಮಲೆನಾಡಿನ ಉಳಿವಿಗಾಗಿ ಹೋರಾಟದ ಲಕ್ಷ್ಯದಲ್ಲಿರುವ, ನಗರ ಮತ್ತು ಮಲೆನಾಡು ನಡುವೆ ಕುಡಿಯುವ ನೀರು ಸಂಘರ್ಷವಾಗಿರುವ ಈ ಸಮಯದಲ್ಲಿ, ಇಂತಹ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಒಂದು ಸಣ್ಣ ಅವಲೋಕನ ಮಾಡಿಕೊಳ್ಳೊಣ.

 

ಸ್ವಾತಂತ್ರ್ಯೋತ್ತರದ ಕಾಲದ ಗ್ರಾಮೀಣ ಪ್ರದೇಶ ಇಂದಿನಂತಿರಲಿಲ್ಲ.ಚದುರಿದಂತಿರುವ ಹಳ್ಳಿಗಳು, ಕಾಲುದಾರಿ,ಎತ್ತಿನಗಾಡಿಯೇ ಸಂಪರ್ಕ ಸಾಧನ.ವಾರಕ್ಕೊಮ್ಮೆ ಬರುವ ಅಂಚೆಯಣ್ಣ ಹೊರಗಿನ ಕೊಂಡಿ.ಈಗಿನಂತೆ ಶಾಲೆಗಳಿರಲಿಲ್ಲ. ಐದಾರು ಹಳ್ಳಿಗಳೊಂದರಂತೆ ನಾಲ್ಕು ತರಗತಿಗಳ ಪ್ರಾಥಮಿಕ ಶಾಲೆಗಳು. ಯಾರದ್ದೋ ಮನೆಯಲ್ಲಿ ಅತಿಥಿಯಾಗಿ ಉಳಿದುಕೊಂಡು ಮಕ್ಕಳಿಗೆ ಅಕ್ಷರ ಕಲಿಸುವ ಶಿಕ್ಷಕರು.ಪ್ರೌಢ ಶಿಕ್ಷಣ ತಾಲೂಕು ಕೇಂದ್ರದಲ್ಲಿ, ಹೆಚ್ಚಿನ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಜಿಲ್ಲಾ ಕೇಂದ್ರದಲ್ಲಿ.ಮೈಸೂರು ಬೆಂಗಳೂರಿನಂಥ ನಗರದಲ್ಲಿ.ವಸಾಹುತಶಾಯಿ ಆಡಳಿತ ವ್ಯವಸ್ಥೆ ಕಲ್ಪಿಸಿದ ವ್ಯವಸ್ಥೆಯನ್ನು ಹೊರತು ಪಡಿಸಿದರೆ ಬೇರೆ ಎಲ್ಲಾ ಕಡೆಗಳಲ್ಲೂ ಮೂಲ ಸೌಕರ್ಯ ಒದಗಿಸುವುದು ಸರಕಾರ ಸಂಘ ಸಂಸ್ಥೆಗಳಿಗೂ ಸುಲಭ ಸಾಧ್ಯವಾಗಿರಲಿಲ್ಲ. ಪರಕೀಯ ಆಡಳಿತ ಕಾಲದಲ್ಲಿ,ರಾಜಾಡಳಿತ ಕಾಲದಲ್ಲಿ ಅಭಿವೃದ್ಧಿ ಕಾರ್ಯಗಳು ನಗರಕೇಂದ್ರಿತವಾಗಿದ್ದವು. ಅದನ್ನುನುಸರಿಸಿ ಸ್ವಾತಂತ್ರ್ಯೋತ್ತರದ ಆಡಳಿತಗಾರರು ನಗರ ಬೆಳೆಸುವಲ್ಲಿ ಉತ್ಸುಕರಾಗಿದ್ದರು. ನಗರೀಕರಣವೇ ನಾಗರಿಕತೆಯ ಪ್ರತಿಬಿಂಬವನ್ನಾಗಿಸಲು ಕಟಿ ಬದ್ಧರಾಗಿದ್ದರು. ಅದರ ಪರಿಣಾಮವಾಗಿ ನಗರಗಳು ಸುತ್ತಮುತ್ತಲ ಹಳ್ಳಿಗಳನ್ನೂ,ಕೃಷಿ ಜಮೀನುಗಳನ್ನೂ,ಕೆರೆ ಕಟ್ಟೆಗಳನ್ನು ನುಂಗುತ್ತಾ ನಗರ ಹಿಗ್ಗತೊಡಗಿದವು. ಒಂದು ವರದಿಯಂತೆ ೧೯೬೦ರಲ್ಲಿ ಸುಮಾರು ೧೨ ಲಕ್ಷದಷ್ಟಿದ್ದ ಬೆಂಗಳೂರಿನ ಜನಸಂಖ್ಯೆ (https://en.m.wikipedia.org/wiki/History_of_Bangalore) ಇಂದು ಒಂದುವರೆ ಕೋಟಿಗೆ ಏರಿದೆ. ಬಹುತೇಕ ಉದ್ದಿಮೆಗಳು.ನಗರ ಕೇಂದ್ರತವಾಗಿ ನಾಡಿನ ಮೂಲೆ ಮೂಲೆಯ ಜನಗಳನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದೆ.ಇಂದು ದೇಶದಲ್ಲಿ ಹಣಕ್ಕೆ ಪ್ರಾಮುಖ್ಯತೆ ಬಂದಿದೆ. ಹಣವುಳ್ಳವ ಸಮಾಜದಲ್ಲಿ ಗಣ್ಯನಾಗಿದ್ದಾನೆ.ವ್ಯವಸಾಯವನ್ನು ವೃತ್ತಿಯೆಂದು ಪರಿಗಣಿಸಿರದ,ಲಾಭ ನಷ್ಟದ ಲೆಕ್ಕಾಚಾರದ ಲೆಕ್ಕಾಚಾರದಲ್ಲಿ ತೂಗಿನೋಡದ ರೈತ ಸಮುದಾಯವೂ ದೇಶದ ಬದುಕು ಹಣದ ಹಿಂದೆ ಓಡುತ್ತಿರುವಾಗ ತಾನೊಬ್ಬ ಪ್ರಾಮಾಣಿಕನಾಗಿ ಉಳಿದು ಏನನ್ನು ಸಾದಿಸ ಬಲ್ಲೆ ಎಂದು ತನ್ನನ್ನು ತಾನು ಪ್ರಶ್ನಿಸಿಕೊಂಡ. ತಾನೂ ಹಣದ ಹಿಂದೆ ಓಡುತ್ತಿರುವವರ ಜೊತೆಗೆ ವಿದೇಶಿತಳಿಗಳೊಂದಿಗೆ ಓಡತೊಡಗಿದ.ಇದರಿಂದಾಗಿ ಗ್ರಾಮೀಣ ಭಾರತ ನಗರದತ್ತ ಮುಖ ಮಾಡಿತು.

 

ಆದರೆ ಈಗ ಅಭೂತಪೂರ್ವ ಸಂಪರ್ಕ ಕ್ರಾಂತಿ ಆಗಿಹೋಗಿದೆ. ಅನಕ್ಷರತೆ,ಅಜ್ಞಾನ ಬಹುತೇಕ ಮರೆಯಾಗಿದೆ. ಸಾರಿಗೆ ವ್ಯವಸ್ಥೆ ಗಣನೀಯವಾಗಿ ಸುಧಾರಿಸಿದೆ. ಶಿಕ್ಷಣ ಎಲ್ಲರಿಗೂ ದೊರೆಯುತ್ತಿದೆ.ಅತಿ ದೂರದ ಒಂದು ಹಳ್ಳಿಗೂ ಮಹಾನಗರಕ್ಕೂ ವ್ಯತ್ಯಾಸ ಇಲ್ಲದಷ್ಟು ಬದಲಾಗಿದೆ. ಎಲ್ಲಿಯೋ ಒಂದು ದೂರದ ಗುಡ್ಡ ಬೆಟ್ಟಗಳ ಮಧ್ಯೆ ಇದ್ದು ಇಡೀ ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಜಗತ್ತಿನ ಯಾವುದೇ ಭಾಗದ ಮೂಲೆಯಲ್ಲಿರುವ ಆಪ್ತರೊಡನೆ ಸಮಾಲೋಚನೆ ಕ್ಷಣಾರ್ಧದಲ್ಲಿ ಲಭ್ಯ. ಈಗಿನ ಪರಿಸ್ಥಿತಿಯಲ್ಲಿ ಇಡೀ ಜಗತ್ತೇ ಒಂದು ಹಳ್ಳಿಯಾಗಿದೆ. ("ಗ್ಲೋಬಲ್ ವಿಲೇಜ್ - ಅಂತರ್ಜಾಲ ಸೇರಿದಂತೆ ವಿದ್ಯುನ್ಮಾನ ಸಂವಹನ ಮಾದ್ಯಮಗಳ  ಅತಿಯಾದ ಬೆಳವಣಿಗೆಯಿಂದ ವಿಶ್ವದ ವಿವಿಧ ಭಾಗದ, ವಿವಿಧ ಸಂಸ್ಕೃತಿಗಳ ಜನರು ಬಹು ಸುಲಭವಾಗಿ ತಾವಿರುವ ಸ್ಥಳದಿಂದಲೇ  ವ್ಯವಹರಿಸಬಹುದಾದ ಪರಿಕಲ್ಪನೆ. ಯಾವುದೇ ರಾಜ್ಯದ, ರಾಷ್ಟ್ರದ ಗಡಿ ಅಂತರಗಳ ವ್ಯತ್ಯಾಸವಿಲ್ಲದೆ ಸಂಪರ್ಕ ಸಾಧ್ಯವಾಗಿಸಿದ ಬಗೆ.") ಹಾಗಾಗಿ ನಗರಕೇಂದ್ರಿತ ಅಭಿವೃದ್ಧಿಯನ್ನು ಬಿಟ್ಟು ರಾಜ್ಯದ ದೇಶದ ಮೂಲೆ ಮೂಲೆಯಲ್ಲಿರುವ ಹಳ್ಳಿಗಳಿಗೂ ಸಹ ಈ ಸಂಪರ್ಕ ಕ್ರಾಂತಿಯ ಫಲವನ್ನು ಕೊಂಡೊಯ್ದರೆ ನಗರ ಪ್ರದೇಶಗಳ ಅನೇಕ ಸಮಸ್ಯೆಗಳಾದ ನೀರು,ಗಾಳಿ, ಕಸ ವಿಲೇವಾರಿ ವಾಹನದಟ್ಟಣೆ ಮುಂತಾದವನ್ನು ದೂರ ಮಾಡಬಹುದು. ಪ್ರತಿಗ್ರಾಮದ ಯುವಶಕ್ತಿ ನಗರದೆಡೆಗೆ ಹರಿಯುವುದು ತಪ್ಪುತ್ತದೆ. ಇದರಿಂದ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿ ಆಗುವುದಲ್ಲದೆ ಜನರು ಒಂದೆಡೆಯಿಂದ ಮತ್ತೊಂದೆಡೆಗೆ ವಲಸೆ ಹೋಗುವುದು ನಿಲ್ಲುತ್ತದೆ. ಒಂದು ಪ್ರದೇಶದ ಸಂಸ್ಕೃತಿಗಳೂ ಉಳಿಯುತ್ತದೆ.

 

ಮೂಲಸೌಕರ್ಯಗಳು ಎಲ್ಲೆಡೆಯೂ ಲಭ್ಯವಿರುವ ಈ ಕಾಲಘಟ್ಟದಲ್ಲಿ ನಗರೀಕರಣ ಭ್ರಮಾದೀನ ವ್ಯಾಮೋಹವೇ ಸರಿ. ನಮ್ಮ ಮನಸ್ಸನ್ನು ಬದಲಾಯಿಸಿ ಕೊಳ್ಳೋಣ. ಹಳ್ಳಿಗಳಲ್ಲೂ ಪರಿಸರಕ್ಕೆ ಸ್ನೇಹಿ ಆಧುನಿಕ ಸಮಾಜ ನಿರ್ಮಾಣ ಸಾಧ್ಯ ಎನ್ನುವದನ್ನು ತೋರಿಸೋಣ. ಪ್ರತಿ ಹಳ್ಳಿಯನ್ನು ರಾಷ್ಟ್ರದ ತಾಂತ್ರಿಕ ರಾಜಧಾನಿಯಾಗಿಸೋಣ. ಪರಂಪರೆ ಹಳೆಯದಾದಷ್ಟು ತಾಂತ್ರಿಕತೆ ಹೊಸತಾದಷ್ಟು ಗ್ರಾಮಸ್ವರಾಜ್ಯದ ಕನಸು ನನಸಗಾಲು ಅನುವು ಮಾಡಿಕೊಡೋಣ. ಈ ವಿಚಾರವಾಗಿ ನಾವೆಲ್ಲಾ ಒಂದಾಗೋಣ.

 

ಕಳೆದ ನೂರು ವರ್ಷದ ಬೆಂಗಳೂರಿನ ಜನಸಂಖ್ಯೆ:

ವರ್ಷ

ಜನಸಂಖ್ಯೆ

ಏರಿಕೆ

1871

142,513

—    

1881

155,857

+9.4%

1891

180,366

+15.7%

1901

159,030

−11.8%

1911

189,485

+19.2%

1921

237,496

+25.3%

1931

306,470

+29.0%

1941

406,760

+32.7%

1951

778,977

+91.5%

1961

1,199,931

+54.0%

1971

1,653,779

+37.8%

1981

2,913,537

+76.2%

1991

3,628,165

+24.5%

 

 

 

ನಗರೀಕರಣದಿಂದ ಗ್ರಾಮಸ್ವರಾಜ್ಯದ ಕಡೆಗೆ