ಷೋಡಶ ಸಂಸ್ಕಾರಗಳಲ್ಲಿ ಹನ್ನೆರಡನೆಯದಾದ ಸಮಾವರ್ತನ ವಿದ್ಯಾರ್ಥಿ ಜೀವನದ ಮುಕ್ತಾಯವನ್ನು ಗುರುತಿಸುತ್ತದೆ. ಅಂದರೆ, ಬ್ರಹ್ಮಚರ್ಯ ಅವಧಿಯನ್ನು ಪೂರ್ತಿಗೊಳಿಸಿ ಮತ್ತು ಗೃಹಸ್ಥಾಶ್ರಮವನ್ನು ಪ್ರವೇಶಿಸಲು ಗುರುವಿನ ಅಪ್ಪಣೆ ಕೋರುವ ಸಮಯ. ಹಿಂದೆ, ಈ ಘಟ್ಟದಲ್ಲಿ ಗುರುಕುಲವನ್ನು ಬಿಡುವ ವಿದ್ಯಾರ್ಥಿಗಳಿಗೆ ಧರಿಸಲು ಎರಡನೇ ಯಜ್ಞೋಪವೀತವನ್ನು ನೀಡಲಾಗುತ್ತಿತ್ತು.
ಈಗಿನ ಕಾಲಘಟ್ಟದಲ್ಲಿ ವಿವಾಹ ಸಂದರ್ಭದಲ್ಲಿ ಇದನ್ನು ಕಾಶಿಯಾತ್ರೆ ಎಂಬುದಾಗಿ ಆಚರಿಸುವುದು ರೂಡಿ.
ಈ ಸಂದರ್ಭದಲ್ಲಿ ಹೇಳುವ ಹಾಡು,
ಕಾಶೀ ಯಾತ್ರೆಗೆ ಪೋಪನು ಕಂದಯ್ಯನು ಕಾಶೀ ಯಾತ್ರೆಗೆ ಪೋಪನು |
ತಡೆದನು ಮುಂದೆ ಮಾವನು ಬಂದೀಗಾ ಹೆಣ್ಣು ಕೊಡುವೆವೆನೆಂದು ಯಾತ್ರೆ ನಿಲ್ಲಿಸು ಇಂದು||
ಗೌರಿಸುತನ ಪೂಜಿಸಿ ಕರಗಳ ಮುಗಿದು ಕಂದಯ್ಯ ಹರುಷದಲಿ |
ಬಂಧು ಬಾಂದವರಿಗೆ ವಂದನೆಯನು ಮಾಡಿ ಗಂಗಾ ಯಾತ್ರೆಯ ಮಾಡಿ ಬರುವೆನೆಂದ್ಹೊ ರಟ ||೧||
ಜನನಿ ಪಾದಕೆ ಎರಗಿ ಅಪ್ಪಣೆ ನೀಡು ಗಂಗಾ ಯಾತ್ರೆಗೆ ಪೋಪೆನು|
ಕಂದ ನೀ ನಾರಿಯನೊಡಗೊಂಡು ಬೇಗದಿ ಆಶೀರ್ವಾದವ ಮಾಡಿ ಆನಂದದಿಂದಲೆ ||೨||
ಸುಗುಣ ನಿತ್ಯಾತ್ಮಕನು ಪರಿಪರಿ ವಸ್ತ್ರ ಆಭರಣವ ಧರಿಸಿ |
ಭೂಸುರರೊಡನೆ ಆಶೀರ್ವಾದವ ಕೈಗೊಂಡ ಭೂಕೈಲಾಸವ ನೋಡಿ ಬರುವೆನೆಂದ||೩||
ಕಾಲಿಗೆ ಆವಿಗೆಯು ಹೆಗಲಿಗೆ ಗಂಟು ಬೆರಳಿನೊಳು ಉಂಗುರವು|
ತಂಬಿಗೆ ಕರದೊಳು ಪಿಡಿಯುತಾ ನಾನು ಯಾತ್ರೆ ಮಾಡುಬರುವೆನೆಂದ್ಹೆ ನುತಾ||೪||
ವಸ್ತಿಲಿಳಿದು ಬರಲು ಭಾವಯ್ಯನಿಗೆ ಮುತ್ತೈದೆಯರು ಬಂದು|
ಪುತ್ರನೆ ನಿನಗೆ ವಿವಾಹವಾಗುವುದೆಂಬ ಶುದ್ಧ ವಾಕ್ಯವ ಕೇಳುತ ನಾವು ಬಂದೆವು||೫||
ಬಾಗಿಲಿಳಿದು ಬರಲು ಬಾಲಯ್ಯನಿಗೆ ಬ್ರಾಹ್ಮಣೋತ್ತಮರು ಬಂದು|
ಮಂಗಲಕಾರ್ಯವು ಸಿದ್ಧಿಯಾಗುವುದು ಎಂದು ಶುಭವಾಕ್ಯವ ಹೇಳುತಲಿರುವರು||೬||