ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ:
ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.
"ಉಪನಯನ" ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ.
ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ.
ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದು. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ.
ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸ ಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನ ಸಂಗಾತಿಗೆ ಮುಡಿಪಾಗಿರುತ್ತದೆ.
ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ. ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ. ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ. ಮೂರು ಪ್ರಮುಖ ಎಳೆಗಳಲ್ಲಿ ಒಂದೊಂದರಲ್ಲಿ ಪುನಃ ಮೂರು ಉಪ ಎಳೆಗಳಿರುತ್ತವೆ. ಹಾಗಾಗಿ ಒಟ್ಟು ಯಜ್ಞೋಪವೀತದಲ್ಲಿರುವ ಎಳೆಗಳು ಒಂಬತ್ತು. ಒಂದು ಮುಖ, ಎರಡು ಮೂಗಿನ ಹೊಳ್ಳೆಗಳು, ಎರಡು ಕಣ್ಣುಗಳು, ಎರಡು ಕಿವಿಗಳು, ಮಲ ಹಾಗೂ ಮೂತ್ರ ದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ. ಹಾಗೇ ಯಜ್ಞೋಪವೀತವೂ ಸಹ ಒಂಬತ್ತು ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೇ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸ ಬೇಕು, ಕಣ್ಣಿನಿಂದ ಒಳ್ಳೆಯ ವಿಷಯಗಳನ್ನು ನೋಡ ಬೇಕು, ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳ ಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ.
ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ. ಐದು ಗಂಟುಗಳು ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ. ಹಾಗೇ ಪಂಚ ಯಜ್ಞ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮಗಳನ್ನು ಪ್ರತಿನಿಧಿಸುತ್ತದೆ.
ಯಜ್ಞೋಪವೀತದ ಉದ್ದ ತೊಂಬತ್ತಾರು ಇಂಚುಗಳಷ್ಟಿರ ಬೇಕು. ಏಕೆಂದರೆ ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಅರವತ್ತ ನಾಲ್ಕು ಕಲೆಗಳನ್ನು ಹಾಗೂ ಮೂವತ್ತೆರಡು ವಿದ್ಯೆಗಳನ್ನು ಕಲಿಯುವ ಹಂಬಲವಿರ ಬೇಕು. ಆತ ಆ ನಿಟ್ಟಿನಲ್ಲಿ ಪ್ರಯತ್ನಿಸ ಬೇಕು. ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ಅಂಗಗಳು, ಆರು ದರ್ಶನಗಳು, ಮೂರು ಸೂತ್ರ ಗ್ರಂಥಗಳು, ಒಂಬತ್ತು ಅರಣ್ಯಕಗಳನ್ನು ಸೇರಿಸಿದರೆ ಮೂವತ್ತೆರಡು ವಿದ್ಯೆಗಳಾಗುತ್ತವೆ. ವಾಸ್ತು ನಿರ್ಮಾಣ, ಚಿತ್ರಕಲೆ, ಸಾಹಿತ್ಯ, ಯಂತ್ರ ನಿರ್ಮಾಣ, ಆಭರಣ ತಯಾರಿಕೆ, ಕೃಷಿ ಜ್ಞಾನ ಮುಂತಾದವು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಈ ವಿದ್ಯೆಗಳನ್ನು ಕಲಿಯಲು ಪ್ರಯತ್ನಿಸ ಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ.
ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. "ತತ್ಸವಿತುರ್ವರೇಣ್ಯಮ್” ಮೊದಲ ಚರಣ. "ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ". "ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.
ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ:-
ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||
ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ
ಯಜ್ಞೋಪವೀತದ ನಿಯಮಗಳು:-
* ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು ಎಡಗಿವಿಯ ಮೇಲೆ ಹಾಕಿ ಕೊಳ್ಳ ಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿ ಕೊಳ್ಳ ಬೇಕು. ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ.
* ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸ ಬೇಕು. ತುಂಡಾಗಿರುವ ಜನಿವಾರವನ್ನು ಧರಿಸಿರ ಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸ ಬೇಕು.
* ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸ ಬೇಕು.
* ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯ ಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು.
ಯಜ್ಞೋಪವೀತದ ವೈಜ್ಞಾನಿಕ ಮಹತ್ವ:-
* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದರಿಂದ ವಿಷಾಣುಗಳು ನಾಶಗೊಳ್ಳುತ್ತವೆ.
* ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ ನರ ಉದರ ಭಾಗವನ್ನು
ಸಂಪರ್ಕಿಸುತ್ತದೆ. ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳು
ಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.
* ಚಿಕಿತ್ಸಾ ವಿಜ್ಞಾನದ ಪ್ರಕಾರ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.
* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಭಯ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.
* ಯಜ್ಞೋಪವೀತವನ್ನು ಧರಿಸುವುದರಿಂದ ದೇಹದಲ್ಲಿರುವ ಸೂರ್ಯ ನಾಡಿ ಜಾಗೃತವಾಗಿರುತ್ತದೆ.
* ವ್ಯಕ್ತಿಯ ಎಡ ಬೆನ್ನಿನ ಭಾಗದಲ್ಲಿ ಹೊಟ್ಟೆಯ ಕಡೆ ಸಾಗುವ ಒಂದು ಪ್ರಾಕೃತಿಕ ರೇಖೆಯಿರುತ್ತದೆ. ಈ ರೇಖೆ ವಿದ್ಯುತ್ ಪ್ರವಾಹದಂತೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಯಜ್ಞೋಪವೀತವನ್ನು ಧರಿಸುವುದರಿಂದ ಈ ರೇಖೆಯ ಶಕ್ತಿ ಕಡಿಮೆಯಾಗುತ್ತದೆ. ಆಗ ವ್ಯಕ್ತಿಯ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು ನಿಯಂತ್ರಣವಾಗುತ್ತವೆ.
* ಯಜ್ಞೋಪವೀತ ವ್ಯಕ್ತಿಯ ಅಂತಃಪ್ರೇರಣೆಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರಿಸುತ್ತದೆ.
* ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವಾಗ ಕಿವಿಯನ್ನು
ಹಿಂಡಲಾಗುತ್ತಿತ್ತು. ಇದಕ್ಕೆ ಕಾರಣ ಕಿವಿಗೂ ಹಾಗೂ ಮೆದುಳಿಗೂ ಇರುವ
ಸಂಪರ್ಕ. ಕಿವಿಯನ್ನು ಎಳೆದಾಗ ವಿದ್ಯಾರ್ಥಿಯ ಮೆದುಳು ಜಾಗೃತವಾಗುತ್ತಿತ್ತು. ವಿದ್ಯಾರ್ಥಿಯ ಆಲಸ್ಯತನ ದೂರವಾಗುತ್ತಿತ್ತು. ಹಾಗೇ
ಯಜ್ಞೋಪವೀತವನ್ನೂ ಕಿವಿಯ ಮೇಲೆ ಹಾಕಿ ಕೊಂಡಾಗ ನಮ್ಮಲ್ಲಿರುವ ಆಲಸ್ಯತನ ದೂರಾಗಿ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ.
ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯ.