Submitted by devaru.rbhat on ಭಾನು, 02/15/2015 - 21:42

ಕರ್ನಾಟಕದ ಕನ್ನಡಾಂಬೆ ಭುವನೇಶ್ವರಿಯ ಏಕೈಕ ದೇವಾಲಯ ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಭುವನಗಿರಿಯಲ್ಲಿದೆ. ಈ ದೇವಾಲಯವನ್ನು 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಭುವನೇಶ್ವರಿ ತಾಯಿಯ ರಥೋತ್ಸವ ಪ್ರತಿವರ್ಷ ಮಾಘಶುದ್ಧ ಹುಣ್ಣಿಮೆಯ ದಿನ ನಡೆಯುತ್ತಿದ್ದರೂ ಹೊರ ಪ್ರಪಂಚಕ್ಕೆ ಹೆಚ್ಚು ಗೊತ್ತಾಗದಂತೆ ನಡೆದು ಹೋಗುತ್ತಿದೆ. ಹಾಗೆಯೇ ರಥ ನಿರ್ಮಾಣವಾದ ಕಾಲ ನಿರ್ದಿಷ್ಟವಿಲ್ಲವಾದ್ದರಿಂದ ರಥೋತ್ಸವ ಆರಂಭವಾದಗಿನಿಂದಲೂ ಬಳಕೆಯಾಗುತ್ತಿರುವ ರಥ ಇದಾಗಿದೆ. ರಥದ ನಿರ್ಮಾತೃ ಅಥವಾ ಕೆತ್ತನೆ ಮಾಡಿದ ಶಿಲ್ಪಿಯ ಉಲ್ಲೇಖವಾಗಲೀ ಇದರಲ್ಲಿ ಇಲ್ಲ. ಇದರಲ್ಲಿ ಉಪಯೋಗಿಸಿದ ಮರಮಟ್ಟುಗಳ ಗುಣ ಧರ್ಮಗಳನ್ನು ಆಧರಿಸಿ 500 ವರ್ಷಗಳಿಗೂ ಹಿಂದಿನ ರಥ ಎಂದು ಗಣೇಶ ಆಚಾರ್ ರವರ ಅಭಿಪ್ರಾಯ. ರಥದಲ್ಲಿನ ದಾರು ಕಲಾ ವೈಭವವೂ ಸಹ ಅನೇಕ ವರ್ಷಗಳಿಂದಲೂ ರಥಕ್ಕೆ ಬಳಿಯುತ್ತಾ ಬಂದಿರುವ ಎಣ್ಣೆ ಹಾಗೂ ಅದರ ಮೇಲೆ ಕುಳಿತ ಧೂಳಿನಿಂದಾದ ಕಿಟ್ಟದಿಂದಾಗಿ ಯಾರ ಗಮನಕ್ಕೂ ಬಾರದಂತೆ ಉಳಿದುಕೊಂಡಿತ್ತು.

ರಥದಲ್ಲಿನ ದಾರು ಕೆತ್ತನೆಗಳನ್ನು ಗಮನಿಸಿದಾಗ ಪ್ರಾಯಶಃ ತಾಯಿಯ ದೇವಾಲಯದಂತೆ ತೇರೂ ಸಹ ವೈಶಿಷ್ಠ್ಯ ಪೂರ್ಣವಾಗಿದ್ದು ಅದ್ವಿತೀಯವೆನಿಸುತ್ತಿದೆ.

 

ಎಲ್ಲ ರಥಗಳ ಕೆತ್ತನೆಯಂತೆ ಇಲ್ಲಿನ ರಥದಲ್ಲಿಯೂ ಸಹ ರಾಮಾಯಣ, ದಶಾವತಾರ, ಮಹಾಭಾರತಗಳೇ ಪ್ರಧಾನ ವಿಷಯಗಳಾಗಿದ್ದರೂ, ರಾಮಾಯಣದ ಆದಿಯಿಂದ ರಾಮ ಪಟ್ಟಾಭಿಷೇಕದ ವರೆಗಿನ ಸಂಗತಿಗಳನ್ನು ವಿವರವಾಗಿ ಕೆತ್ತಲಾಗಿದೆ. ಚಿತ್ರದ ಸೌಂದರ್ಯದೊಂದಿಗೆ ಕಲಾವಿದನ ಕಲ್ಪನೆಯು ಇಲ್ಲಿ ಅಮೋಘವಾಗಿ ವಿಜ್ರಂಭಿಸಿದೆ. ಎಲ್ಲ ಚಿತ್ರಣಗಳನ್ನು ಹೆಚ್ಚು ಸ್ಪಷ್ಟ ಸ್ಫುಟ ಗೊಳಿಸಲಾಗಿದೆ. ರಾಮಾಯಣದಲ್ಲಿ ಬರುವ ವಿಭೀಷಣ ರಾಮನಲ್ಲಿಗೆ ಬಂದು ತೋರುವ ತನ್ನ ಶರಣಾಗತಿಯ ಚಿತ್ರದ ಒಂದು ಪಾಶ್ರ್ವದಲ್ಲಿ ಜಲಚರಗಳನ್ನು ಚಿತ್ರಿಸುವ ಮೂಲಕ ಸಮುದ್ರದ ಕಲ್ಪನೆಯನ್ನು ನೀಡಿ ಸಮುದ್ರದಾಚೆಯ ಘಟನೆ ಎಂಬುದನ್ನು ಸ್ಪಷ್ಟಗೊಳಿಸಿದ್ದಾನೆ.

 

ಸೀತಾ ವಿವಾಹ, ಸೀತೆಯನ್ನು ಹಾರೈಸಿ ಪತಿ ಗೃಹಕ್ಕೆ ಕಳುಹಿಸಿಕೊಡುತ್ತಿರುವ ಜನಕರಾಜ, ರಾಮ ಲಕ್ಷ್ಮಣರ ಅನ್ಯೋನ್ಯತೆ, ವಾನರರ ಭೇಟಿ, ವಾಲಿ ಸುಗ್ರೀವರ ಕಾಳಗ, ಸುಗ್ರೀವನ ಪಟ್ಟಾಭಿಷೇಕ, ಶಬರಿ, ಜಟಾಯು ಸೇನಾ ಸಮೇತ ರಾಮ ಸೇತುವೆಯ ಮೇಲೆ ಲಂಕೆಗೆ ಪಯಣ, ರಾಮ ರಾವಣರ ಯುದ್ಧ, ರಾಮ ಸೀತೆಯರನ್ನು ಹೊತ್ತು ತರುತ್ತಿರುವ ಹನುಮಂತ ಹೀಗೆ ವನವಾಸದಲ್ಲಿನ ವಾಸದಲ್ಲಿನ ವಿವಿಧ ಸನ್ನಿವೇಶಗಳ ಸ್ಪಷ್ಟ ಚಿತ್ರಣಗಳನ್ನು ಕಲಾವಿದ ಮುದ್ದಾಗಿ, ಸುಂದರವಾಗಿ ರಚಿಸಿರುವುದು ಅನೇಕ ವರ್ಷಗಳ ನಂತರವೂ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಶೂರ್ಪನಖಿಯ ಮಾನಭಂಗ ಚಿತ್ರದಲ್ಲಿಯೂ ಸಹ ಶೂರ್ಪನಖಿಯ ಕುಚಗಳನ್ನು ಕುಪ್ಪಸದ ಹೊರಗೂ ಚಿತ್ರಿಸಿ, ಲಕ್ಷ್ಮಣ ಅವಳೆಡೆಗೆ ಬಾಣ ಬಿಡುವ ಸನ್ನಿವೇಶದ ಸುಂದರ ಚಿತ್ರವನ್ನು ರಚಿಸಿ ಸನ್ನಿವೇಶದ ಪರಿಚಯ ಮಾಡಿಸಿದ್ದಾನೆ.

ಸುಗ್ರೀವ ಹಾಗೂ ಆತನ ಬಳಗವನ್ನು ಚಿತ್ರಿಸುವಾಗ ಸ್ತ್ರೀ ಪುರುಷರ ವ್ಯತ್ಯಾಸವನ್ನು ಮುಖ ಭಾವದಲ್ಲಿ ಸ್ಪಷ್ಟಪಡಿಸಿರುವುದು ಕಲಾವಿದನ ಕಲಾತ್ಮಕತೆಗೊಂದು ಸಾಕ್ಷಿಯಾಗಿ ಗೋಚರಿಸುತ್ತದೆ.

ದಶಾವತಾರಗಳಲ್ಲಿ ಒಂದಾದ ವಾಮನ ಅವತಾರದ ಚಿತ್ರಣವೂ ಸಹ ಅಷ್ಟೇ ಸೊಗಸಾಗಿ ಮುಗ್ಧ ಬಾಲಕ ರೂಪಿ ವಾಮನ ತನ್ನ ಪುಟ್ಟ ಪಾದಗಳಿಂದ ಸಮಸ್ತ ಲೋಕವನ್ನೂ ಅಳೆದು ಬಲಿಚಕ್ರವರ್ತಿಯ ತಲೆಯ ಮೇಲೆ ಕಾಲಿಡುವ ಚಿತ್ರ ಅತ್ಯಂತ ಮನೋಜ್ಞವಾಗಿದೆ. ಹೀಗೆ ಇಲ್ಲಿನ ವರಾಹವತಾರ, ಕೂರ್ಮಾವತಾರ, ಮತ್ಸಾವತಾರ, ಶೇಷಶಯನ ಇತ್ಯಾದಿ ಎಲ್ಲ ಚಿತ್ರಗಳೂ ಸೌಂದರ್ಯ, ಸೌಷ್ಟವಗಳ ದೃಷ್ಟಿಯಿಂದ ಅಷ್ಟೇ ಗಮನ ಸೆಳೆಯುವ ಜೊತೆಗೆ ಯಾವುದೇ ಅನುಮಾನಕ್ಕೆಡೆ ಕೊಡದ ರೀತಿಯಲ್ಲಿ ಸನ್ನಿವೇಶ, ವ್ಯಕ್ತಿ ಚಿತ್ರಣಗಳನ್ನು ಅನಾವರಣಗೊಳಿಸಿದೆ.

ಸಮುದ್ರ ಮಥನದ ಚಿತ್ರವಿರುವ ಪಟ್ಟಿಕೆ ಅಂತ್ಯಂತ ಜೀಣಾವಸ್ಥೆಯನ್ನು ತಲುಪಿದ್ದು ಅದನ್ನು ಪುನಃ ಕೆತ್ತನೆ ಮಾಡಬೇಕಾದ ಅನಿವಾರ್ಯತೆ ತಲೆದೋರಿದೆ.

ಹನುಮಂತ ರಾಮ ಲಕ್ಷ್ಮಣರನ್ನು ತನ್ನ ಭುಜದ ಮೇಲೆ ಹೊತ್ತು ಸಮುದ್ರಕ್ಕೆ ನಿರ್ಮಿಸಿದ ಸೇತುವೆಯನ್ನು ದಾಟುವ ಸನ್ನಿವೇಶವೂ ಅಷ್ಟೇ ಸೊಗಸಾಗಿ ಚಿತ್ರಣಗೊಂಡಿದೆ.

ಇಷ್ಟೇ ಸಾಲದೆಂಬಂತೆ ಇಲ್ಲಿ ಅನೇಕ ವೈಶಿಷ್ಟ್ಯ ಪೂರ್ಣ ಕಲಾಕೃತಿಗಳನ್ನು ಕೆತ್ತಲಾಗಿದೆ. ಅವುಗಳಲ್ಲಿ ಶಿವ ಇಂದ್ರರ ಗಣ, ಆರು ತಲೆಯನ್ನು ಹೊಂದಿದ ಅಪರೂಪದ ಷಣ್ಮುಖ, ಋಷ್ಯಶೃಂಗ, ಸೀತಾ ಕಲ್ಯಾಣದ ಕ್ಷಣಗಳು, ಪಿರಮಿಡ್ ಜೋಡಣೆಯ ರೀತಿಯಲ್ಲಿ ಸುಂದರಿಯರು ಸೇರಿ ನಿರ್ಮಿಸಿದ ಆನೆ, ಕುದುರೆಗಳು ಅವುಗಳ ಮೇಲೆ ಆಸೀನರಾದ ಸುಂದರ ದೇವತೆಯನ್ನು ಹೋಲುವ ಮಹಿಳೆಯರು (ಅಧ್ಯಯನ ಯೋಗ್ಯವಾದವು) ಮುಂತಾದವುಗಳ ವೈಭವಪೂರ್ಣ ಕಲಾಕೃತಿಗಳು ಈ ರಥದಲ್ಲಿ ಕಾಣಬರುವ ವೈಶಿಷ್ಟ್ಯಪೂರ್ಣ ಕೆತ್ತನೆಗಳು ಅಧ್ಯಯನ ಯೋಗ್ಯವಾಗಿ ಕಾಣಬರುತ್ತಿದೆ. ಇವೆಲ್ಲವುಗಳ ಜೊತೆಗೆ ಪಕ್ಷಿ, ಪ್ರಾಣಿಗಳು, ಮಿಥುನ ಶಿಲ್ಪಗಳು, ಸಮೂಹ ಕೇಳಿಗಳಂಥ ಚಿತ್ರಗಳೂ ಸಹ ಕಂಡುಬರುತ್ತವೆ. ಕೆಳದಿ ಅರಸರ ಚಿಹ್ನೆಯಾಗಿದ್ದ ಗಂಡಬೇರುಂಡ, ಮಹಿಳೆಬ್ಬರು ಕುದುರೆ ಸವಾರಿ ಮಾಡುತ್ತಿರುವುದು, ಲಿಂಬೆ ಹಣ್ಣು ಹಿಡಿದ ಮಹಿಳೆಯರು, ಋಷಿ - ರಾಜರುಗಳಿಗೆ ಸಂಬಂಧಿಸಿದ ಚಿತ್ರಗಳು ಅಂದಿನ ಕಾಲದ ಭಾವೈಕ್ಯತೆ, ಸಾಮಾಜಿಕ ಸ್ಥಿತಿ ಗತಿ ನಡವಳಿಕೆಗಳು ರಾಜಕೀಯ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದವುಗಳೆಂದು ಅಂದಾಜಿಸಬಹುದಾದರೂ ಅವುಗಳು ತಜ್ಞರ ಪರಿಶೀಲನೆಯಿಂದಲೇ ತಿಳಿಯಬೇಕಾಗಿದೆ.

ಭುವನಗಿರಿ - ಭುವನೇಶ್ವರಿ ರಥ