ಭಾರತಕ್ಕೆ ಮೊಘಲರನ್ನೂ, ಬ್ರಿಟಿಷ್ ರನ್ನೂ ಬಿಟ್ಟು ಇತಿಹಾಸವಿದೆ ಎಂಬುದನ್ನು ಮರೆಯದಿರೋಣ.
ಈ ಹಿಂದೆ ಸ್ವಾತಂತ್ರ್ಯ ಹೋರಾಟಕ್ಕಾಗಿ, ನಮ್ಮ ಭಾಷೆ, ಸಂಸ್ಕೃತಿ, ಪರಂಪರೆ ಉಳಿವಿಗಾಗಿ ಪ್ರಾಣತೆತ್ತ ಮಹನೀಯರುಗಳು ಅದೆಷ್ಟೋ ಲೆಕ್ಕವೇ ಇಲ್ಲ. ಆದರೂ ಇವತ್ತು ಈ ದಿನ ನಾವು ಅದಾವುದರ ಪರಿವೆಯೇ ಇಲ್ಲದೆ ಇಂಗ್ಲಿಷ್ ಸಂಸ್ಕೃತಿಯ ದಾಸರಾಗುತ್ತಿದ್ದೇವೆ ಅಲ್ಲವೆ. ಆಧುನಿಕತೆ ಎಂದರೆ ಇಂಗ್ಲಿಷ್ ಅಂತ ಬೀಜ ಬಿತ್ತಿದ ಮೆಕಾಲೆ ಶಾಲೆಗಳಿಗಾಗಿ ನಾವೇಕೆ ಪರಿತಪಿಸುತ್ತಿದ್ದೇವೆ. ಆಧುನಿಕತೆ ಎಂದರೆ ವೆಸ್ಟರ್ನೈಸೇಶನ್ ಅಂತ ಅದೇಗೆ ಭಾವಿಸಿದ್ದೇವೆ. ಚೀನಿ ಜಪಾನೀಯರು ತಮ್ಮ ಪಾರಂಪರಿಕ ಸಂಗತಿಗಳನ್ನು ಆಧುನೀಕರಣಗೊಳಿಸಿದಂತೆ ನಾವೇಕೆ ನಮ್ಮ ಪರಂಪರೆಯನ್ನು ಆಧುನೀಕರಣಗೊಳಿಸುತ್ತಿಲ್ಲ. ಸಾವಿರಾರು ವರ್ಷಗಳಿಂದ ಅನೇಕ ಅನೇಕ ಬದಲಾವಣೆಗಳೊಂದಿಗೆ ವಿಕಸಿತಗೊಂಡ ಸಂಸ್ಕೃತಿ, ಪರಂಪರೆಯೊಂದು ಈಗಷ್ಟೇ ಐದಾರು ಶತಮಾನದಿಂದ ಕಣ್ಣು ಬಿಡುತ್ತಿರುವ ಸಂಸ್ಕೃತಿಗೆ ಶರಣಾಗಿರುವುದು ವಿಷಾದ ಅನಿಸುತ್ತಿಲ್ಲವೇ ಮಿತ್ರರೇ. ಮತ್ತೊಮ್ಮೆ ಹೇಳುತ್ತಿದ್ದೇನೆ ಆಧುನಿಕತೆ ಎಂದರೆ ವೆಸ್ಟರ್ನೈಸೇಶನ್ ಅಲ್ಲ. ತಂತ್ರಜ್ಞಾನ ಸಾವಿರಾರು ವರ್ಷದ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ವಿಕಾಸವಾಗುತ್ತದೆ. ಈ ಹಿಂದೆ ನಮ್ಮ ಪರಂಪರೆಯಲ್ಲಿ ಇದ್ದ ತಂತ್ರಜ್ಞಾನ ಬೇರೆಲ್ಲೂ ಇರಲಿಲ್ಲ ಅಲ್ಲವೆ. ನಮ್ಮ ಪುರಾತನ ದೇವಸ್ಥಾನಗಳನ್ನು ಕಟ್ಟಲು ಅದೆಂತ ತಂತ್ರಜ್ಞಾನವನ್ನು ಆಗಲೇ ಬಳಸಿದ್ದಾರೆ ಅಲ್ಲವೇ. ಆ ಕರಕುಶಲತೆಗೆ ಬೇರೆ ಸಾಟಿ ಉಂಟೇ. ವಿಜ್ಞಾನ, ಗಣಿತ, ಜೀವಶಾಸ್ತ್ರ, ಲೋಹ ಶಾಸ್ತ್ರ, ಖಗೋಳಶಾಸ್ತ್ರ ಇತ್ಯಾದಿ ಅನೇಕಾನೇಕ ವೈಜ್ಞಾನಿಕ ಸಂಶೋಧನೆಗಳು ಆಗಿ ಹೋಗಿವೆ ಅಲ್ಲವೆ. ಇವತ್ತಿನ ಮೆಕಾಲೆ ಇಂಗ್ಲೀಷ್ ವ್ಯಾಮೋಹ ಇದೇಲ್ಲವನ್ನು ಏಕೆ ಮರೆ ಮಾಡುತ್ತಿದೆ. ನಿತ್ಯ ವಿನೂತನ ವಿಕಸಿತ ಗೊಳ್ಳುವ ಈ ತಂತ್ರಜ್ಞಾನವನ್ನು ನಮ್ಮ ನಿತ್ಯ ಜೀವನವನ್ನು ಉತ್ತಮಗೊಳಿಕೊಳ್ಳಲು ಬಳಸಬೇಕೇ ವಿನಃ, ತಂತ್ರಜ್ಞಾನವನ್ನು ಕಲಿಯಲು ಬೇರೆ ಭಾಷೆ, ಸಂಸ್ಕೃತಿಯನ್ನು ಆಶಿಸುವುದು, ಆಶ್ರಯಿಸುವುದು ಅದೇಕೋ ಸರಿ ಅನಿಸುತ್ತಿಲ್ಲ ಅಲ್ಲವೇ.
ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು. ಹೊಸ ತಾಂತ್ರಿಕತೆ
ಹಳೆ ಪರಂಪರೆ ಕೂಡಿರಲು ಜೀವನ ಸೊಬಗು.
ಈಗಲಾದರೂ ಆಧುನಿಕತೆ ಅಂದರೆ ಅಂದರೆ ವೆಸ್ಟರ್ನೈಸೇಶನ್ ಅಲ್ಲವೆಂದು ತಿಳಿದುಕೊಳ್ಳೊಣವೇ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಾರದಷ್ಟು ಪ್ರಬುದ್ಧತೆಯನ್ನು ನಾವು ಕಳೆದುಕೊಂಡಿದ್ದರೆ, 1947ರಲ್ಲಿ ನಮಗೆ ಸಿಕ್ಕಿರುವುದು ಸ್ವಾತಂತ್ರ್ಯ ಅಲ್ಲ, ಅದು ಬರೀ "Self Governance" ಅಷ್ಟೇ. ಸ್ವಾತಂತ್ರ್ಯ ದಿನಾಚರಣೆಗೂ ಒಂದು ಅರ್ಥ ಇದೆ ಎಂದು ಅನಿಸುತ್ತಿಲ್ಲ.
ಈಗಲಾದರೂ ಅಳಿದುಳಿದ ದೇಶಿತನವನ್ನು, ಭಾರತೀಯರ ವಿಜ್ಞಾನ, ಗಣಿತದ ಕೊಡುಗೆಗಳನ್ನು, ಕಲೆ, ಸಾಹಿತ್ಯ, ಸಂಗೀತ, ಇತ್ಯಾದಿ ಮಹಾಮೇರು ಸಂಸ್ಕೃತಿಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳದಿದ್ದರೆ, ಈಗಾಗಲೆ ಮಲಗಿರುವ ನಮ್ಮತನ, ಸಾಯುವದರಲ್ಲಿ ಸಂಶಯವಿಲ್ಲ. ಕೊನೆಗೆ "...ಸತ್ತಂತಿಯರನು ಬಡಿದೆಚ್ಚೆರಿಸು..." ಎಂದು ಹೇಳಿದ ಕವಿಗಳ ಹೆಸರೂ ನೆನಪಿರುವುದಿಲ್ಲ.
#modernisation #westernisation #ಆಧುನೀಕರಣ #ಪಾಶ್ಚಿಮಾತ್ಯೀಕರಣ #ancient #science #education #ಪ್ರಾಚೀನ #ವಿಜ್ಞಾನ #ಶಿಕ್ಷಣ #independence #ಸ್ವಾತಂತ್ರ್ಯ