Submitted by devaru.rbhat on ಧ, 01/11/2017 - 17:59

ಸುಮಾರಾಗಿ ಆನವಟ್ಟಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಾಗಿರುವ ಜೋಗಿ ಜನಾಂಗದವರು ಜೋಗೇರಾಟ ಎನ್ನುವ ವಿಶಿಷ್ಟ ಜಾನಪದ ಕಲೆಯನ್ನು ಪ್ರದರ್ಶನ ನೀಡುವುದು ಸಾಮಾನ್ಯ.  ಇವರು ಮೂಲತಃ ಕೃಷಿಕರು/ ಕೃಷಿ ಕಾರ್ಮಿಕರು.  ದೀಪಾವಳಿಯ ನಂತರ ತಮ್ಮ ಸುಗ್ಗಿ ಕೆಲಸಗಳನ್ನು ಪೂರೈಸಿದ ನಂತರ ತಮ್ಮದೇ ಆದ ವಿಶಿಷ್ಟವಾದ್ಯ ಪರಿಕರ (ಏಕತಾರಿ/ ಏಕನಾರಿ/ ತಂಬೂರಿ ಬುರುಡೆ)ವನ್ನು ತೆಗೆದುಕೊಂಡು ಊರೂರು ಸುತ್ತಿ ದಾಸರ ಪದವೇ ಮೊದಲಾದ ದೇವರ ನಾಮಗಳನ್ನು ಗೆಜ್ಜೆಯ ನಾದ ಬೀರುವ ಹೆಬ್ಬೆರಳಲ್ಲಿ ಸಿಕ್ಕಿಸಿಕೊಳ್ಳಬಹುದಾದ ಉಂಗುರವನ್ನು ಹಿಡಿದು ಏಕತಾರಿಯ ನಾದಕ್ಕೆ ಶೃತಿ ಸೇರಿಸಿ ಹಾಡುತ್ತಾ ಬರುತ್ತಾರೆ.  ಇವರಿಗೆ ರೈತಾಪಿ ವರ್ಗದವರು ತಮ್ಮಲ್ಲಿ ಬೆಳೆದ ಧವಸ ಧಾನ್ಯ,ಅಡಿಕೆ ಯನ್ನು ಸಂಭಾವನೆಯಾಗಿ ನೀಡುತ್ತಾರೆ.  ಮೊದಲು ಇಬ್ಬರು ಒಟ್ಟೊಟ್ಟಿಗೆ ಬರುತ್ತಿದ್ದರು ಈಗ ಬದಲಾದ ದಿನಗಳಲ್ಲಿ ಒಬ್ಬೊಬ್ಬರೇ ಬಂದು ಹಾಡಿ ಸಂಭಾವನೆಯನ್ನು ಪಡೆದು ಹೋಗುತ್ತಾರೆ.  ಇದು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದು ಈ ಒಂದು ಜಾನಪದ ಕಲೆ ಕಾಣದಾಗುವ ಸಾಧ್ಯತೆ ಇದೆ.  ಜೋಗಿಯವರ ಆಟ ಎಂದರೆ ನೀತಿ ಬೋಧಕ, ಸಂಸ್ಕೃತಿ ಸಾರುವ ಸತಿ ಶೀಲವತಿ ಕಥೆ ಮೊದಲಾದ ಕಥೆಗಳನ್ನು ಕೇವಲ ನಾಲ್ಕೈದು ಜನರು ಹಾಡುತ್ತಾ ಅಭಿನಯಿಸುತ್ತಾ, ಮಧ್ಯೆ ಮಧ್ಯೆ ರಂಜನೀಯವಾದ ಲಾವಣಿಗಳನ್ನು ಹಾಡುತ್ತಾ ಬೆಳಗಿನವರೆಗೂ ಸ್ವಾರಸ್ಯಕರವಾಗಿ  ಕಥೆಗಳನ್ನು ಕಟ್ಟಿಕೊಡುತ್ತಾರೆ.  ಈಗೀಗ ಇದು ಕೇವಲ 2-3 ತಾಸುಗಳ ಕಾಲ ಮಿತಿಗೆ ಬಂದು ನಿಂತಿದೆ.  

 

ಜೋಗಿ - ತಂಬೂರಿ